ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಸಿಹಿಸುದ್ದಿ ನೀಡಿದ್ದಾರೆ. ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಗುವುದು. ಪಡಿತರ ಚೀಟಿಗಾಗಿ ಅರ್ಜಿಗಳನ್ನು ಮಾರ್ಚ್ 31ರೊಳಗೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹೌದು, ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರದದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬಂತು ಎಂದು ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್ಗಳನ್ನು ವಿತರಿಸದೇ ಬಾಕಿ ಉಳಿಸಿಕೊಂಡಿತ್ತು. ಆ ಕಾರ್ಡ್ಗಳನ್ನು ಮತ್ತೆ ಪರಿಶೀಲನೆ ಮಾಡಿ, ಎಪಿಎಲ್ ಯಾವುದು, ಬಿಪಿಎಲ್ ಯಾವುದು ಎಂದು ಪರಿಶೀಲನೆ ನಡೆಸಿ ಬಂದ ತಕ್ಷಣ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ಗಳನ್ನು ನೀಡಲಾಗಿದೆ. ಇಲ್ಲಿಯವರೆಗೂ ಮೆಡಿಕಲ್ ಫೆಸಿಲಿಟಿಗಾಗಿ ಯಾರು ಅರ್ಜಿ ಕೊಟ್ಟಿದ್ದಾರೆ. ಅಂತವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಈ ಮೂಲಕ 744 ಜನರಿಗೆ ಆರೋಗ್ಯ ತುರ್ತು ಕಾರಣಕ್ಕೆ ಕಾರ್ಡ್ ಕೊಟ್ಟಿದ್ದೇವೆ. ಉಳಿದಂತಹ ಕಾರ್ಡ್ಗಳನ್ನು ಮುಂದಿನ ಮಾರ್ಚ್ 31ರೊಳಗೆ ಪರಿಶೀಲನೆ ಮಾಡಿ ವಿತರಿಸುವ ತೀರ್ಮಾನ ಕೈಗೊಂಡಿದ್ದೇವೆ. ಜೊತೆಗೆ ಆದೇಶವನ್ನು ಕೂಡ ಕೊಟ್ಟಿದ್ದೇವೆ ಎಂದರು.
ಮಾರ್ಚ್ 31 ರೊಳಗೆ ಎಲ್ಲಾ 2.95 ಲಕ್ಷ ಕಾರ್ಡ್ಗಳನ್ನು ನಾವು ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಕೆಲಸ ಮುಗಿದ ನಂತರ ಹೊಸ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಅದರಲ್ಲಿ ನಮ್ಮ ಸಭಾಧ್ಯಕ್ಷರೇ ಕೇಳಿದ ಹಾಗೆ ಎಪಿಎಲ್ ಕಾರ್ಡ್ ಕೊಡಲು ಏನು ಸಮಸ್ಯೆ ಎಂದಿದ್ದಾರೆ. ಅದನ್ನೂ ಕೂಡ ಸರಿ ಪಡಿಸುತ್ತೇವೆ. ಏಪ್ರಿಲ್ 1ರ ನಂತರ ಬಂದ ಅರ್ಜಿಗಳು ಮೂರು ತಿಂಗಳಲ್ಲಿ ಪರಿಶೀಲನೆ ನಡೆಸಿ ವಿತರಣೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ವಿವರಿಸಿದರು.
ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಪರಿಹಾರ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ5 ರಷ್ಟು ಏರುಪೇರು ಇದರಲ್ಲಿ ಇದೆ. ಅದನ್ನೂ ಸರಿಪಡಿಸುತ್ತೇವೆ. ಹಾಗೂ ಹೊಸ ಕಾರ್ಡ್ಗಳಿಗೆ ಅರ್ಜಿ ಬಂದರೆ ತಡ ಮಾಡದೆ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಹೊಸ ಪಡಿತರ ಚೀಟಿ ಹಂಚಿಕೆ ಯಾವಾಗ?
ರಾಜ್ಯಾದ್ಯಂತ ಪಡಿತರ ಚೀಟಿಗೆ (Ration Card) ಸಲ್ಲಿಸಿರುವ ಅರ್ಜಿಗಳನ್ನು ಇದೇ ಬರುವ ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (KH Muniyappa) ಸದನದಲ್ಲಿ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ & ತಿದ್ದುಪಡಿ ವೇಳೆ ತಾಂತ್ರಿಕ ಸಮಸ್ಯೆಯಾಗುತ್ತಿದೆ. ಹಲವರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿಲ್ಲ. ಇದರಿಂದ ಐದು ಕೆಜಿಯ ಅಕ್ಕಿಯ ಹಣ ಹಲವು ಫಲಾನುಭವಿಗಳಿಗೆ ಕೆಲವು ತಿಂಗಳಿಂದ ತಲುಪುತ್ತಿಲ್ಲ, ಹಾಗಾಗಿ ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕಿ ನಯನ ಮೋಟಮ್ಮ ಮತ್ತು ವಿರೋಧಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನೆ ಕೇಳಿದರು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
* ನೂತನ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
* ಮುಖಪುಟದಲ್ಲಿ ಕಾಣುವ ಇ ಸೇವಾಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರ ಇ ಪಡಿತರ ಚೀಟಿ ಆಪ್ಷನ್ ಕ್ಲಿಕ್ ಮಾಡಿ.
* ಹೊಸ ಪಡಿತರ ಚೀಟಿ ಎಂಬ ಆಪ್ಷನ್ ಕ್ಲಿಕ್ ಮಾಡಿ.
* ರೇಷನ್ ಕಾರ್ಡ್ ಗಾಗಿ ಹೊಸ ಅರ್ಜಿ ಎಂಬ ಅರ್ಜಿ ಓಪನ್ ಆಗುತ್ತದೆ ನಂತರ ಹೊಸ ಪಡಿತರ ಚೀಟಿ ವಿನಂತಿ ಎಂಬ ಆಪ್ಷನ್ ಕ್ಲಿಕ್ ಮಾಡಿ.
* ನಿಮ್ಮ ಕುಟುಂಬದ ಆದಾಯದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಆಪ್ಷನ್ ನಲ್ಲಿ ನಿಮ್ಮ ಕುಟುಂಬದ ಆದಾಯದ ಮೇಲೆ ಒಂದು ಆಪ್ಷನ್ ಆಯ್ಕೆ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ಹಾಕಿ. ನಂತರ captcha ಸಂಖ್ಯೆಯನ್ನು ಭರ್ತಿ ಮಾಡಿ.
* ಫಿಂಗರ್ ಪ್ರಿಂಟ್ ಪರಿಶೀಲನೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆರಳಿನ ಗುರುತನ್ನು ಫಿಂಗರ್ ಪ್ರಿಂಟ್ ಮಶೀನ್ ಮೇಲೆ ಇಟ್ಟು ಧೃಢಿಕರಿಸಿ.
* ನಂತರ ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ಕುಟುಂಬದವರ ಹೆಸರು ಆಧಾರ್ ಸಂಖ್ಯೆ ವಯಸ್ಸು ಭಾವಚಿತ್ರ ಎಲ್ಲವನ್ನೂ ಅರ್ಜಿಯಲ್ಲಿ ತುಂಬಿ.
* ನಂತರ ನಿಮ್ಮ ಸಮೀಪದ ಪಡಿತರ ವಿತರಣೆ ಹೆಸರು ಕೇಳಲಾಗುತ್ತದೆ. ಅದನ್ನು ಆಯ್ಕೆ ಮಾಡಿ. ನಂತರ ನಗರ ಅಥವಾ ಗ್ರಾಮೀಣ ಭಾಗ ಎಂಬ ಆಯ್ಕೆಗಳು ಇರುತ್ತವೆ. ನಿಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿ.
* ನಿಮ್ಮ ಕುಟುಂಬದ ಯಜಮಾನಿ ಅಥವಾ ಯಜಮಾನ ಯಾರೂ ಎಂಬ ಮಾಹಿತಿಯನ್ನು ಭರ್ತಿ ಮಾಡಿ. ನಂತರ ನಿಮ್ಮಗೆ ಅರ್ಜಿ ಸ್ವೀಕರಿಸುವ ಬಗ್ಗೆ ಒಂದು ಸಂಖ್ಯೆ ಬರುತ್ತದೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ . ನೂತನ ರೇಷನ್ ಕಾರ್ಡ್ ನಿಮಗೆ ಸಿಗುವ ವರೆಗೆ ಈ ಸಂಖ್ಯೆ ಯ ಆಧಾರದ ಮೇಲೆ ಸರ್ಕಾರದ ಸೌಲಭ್ಯವನ್ನು ಪಡೆಯಬಹುದು.